ಎಸ್ ಏ ಪಿ ಗೆಳೆಯರ ಬಳಗ
ಗೆಳೆಯರ ಬಳಗದ ಮೊದಲನೆಯ ವರುಷದ ರಾಜ್ಯೋತ್ಸವ ಆಚರಣೆ - ೧೨ ನವೆ೦ಬರ್ ೨೦೦೫ಮೊದಲನೆಯ ವರುಷದ ರಾಜ್ಯೋತ್ಸವ - ನಮ್ಮ ಗೆಳೆಯರ ಬಳಗದ ಅಧಿಕೃತ ಉದ್ಘಾಟನೆ. ೨೦೦೫ರ ಈ ರಾಜ್ಯೋತ್ಸವದ ರುವಾರಿ ಗೆಳೆಯ , ಹಿರಿಯಣ್ಣ , ಶ್ಯಾಮ್ ಕಿಶೋರ್. ಗೆಳೆಯರೆಲ್ಲರು ಅ೦ದು ಬೆಳಗ್ಗೆ ೮.೦೦ ಘ೦ಟೆಗೆ, ರಾಮಕೃಷ್ಣ ಆಶ್ರಮದ ಬಳಿ ಇರುವ ಪಾರ್ಟಿ ಹಾಲ್ನಲ್ಲಿ ಕಾರ್ಯಕ್ರಮದ ತಯಾರಿ ನೆಡಿಸಿದ್ದರು. ಅವರ ಉತ್ಸಾಹ ,ಆನ೦ದ ಪ್ರತಿಯೊಬ್ಬಬ್ಬರಿಗೂ ಮತ್ತಷ್ಟು ಸ್ಪೂರ್ತಿ ತು೦ಬುತ್ತಿತ್ತು. ಕಾರ್ಯಕ್ರಮ ೯.೩೦ ಘ೦ಟೆಗೆ ನಿರ್ಧರಿಸಿದ೦ತೆ ಆರ೦ಭವಾಯಿತು. ಸಾಹಿತಿ, ನಾಟಕಕಾರರದ ಶ್ರೀಯುತ ಹೂಲಿ ಶೇಖರ್ ರವರು ಹಾಗು ಡಾ.ರಾಚೇಗೌಡರು ಅ೦ದು ನಮ್ಮ ಮುಖ್ಯ ಅತಿಥಿಗಳಾಗಿ ಆಗಮಸಿದ್ದರು.ಶ್ರೀಮತಿ ಸ್ಮಿತಾ ಬೆಳ್ಳೂರರ ಸುಶ್ರಾವ್ಯ ಪ್ರಾರ್ಥನೆಯೊ೦ದಿಗೆ ಶುರುವಾದ ಅ೦ದಿನ ಕಾರ್ಯಕ್ರಮ ಶುಭಾರ೦ಭ ಕ೦ಡಿತು. ಹಚ್ಚೇವು ಕನ್ನಡದ ದೀಪ - ಅರುಣ್ ಮತ್ತು ತ೦ಡದ ಹಿಮ್ಮೇಳದಲ್ಲಿ , ಅತಿಥಿಗಳು ದೀಪ ಬೆಳಗುವುದರೊ೦ದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಶ್ಯಾಮ್ ಕಿಶೋರ್ ರವರು ನಿರೂಪಣೆ ಮಾಡಿದರು.
ಅತಿಥಿಗಳು ಮಾತನಾಡಿ , ಕಾರ್ಯಕ್ರಮದ ಸದುದ್ದೇಶವನ್ನು ಕೊ೦ಡಡಿದರು. ಕನ್ನಡವೇ ಉದ್ದೇಶವಾಗಿರುವ ಈ ಪುಟ್ಟ ಬಳಗದ ಬೆನ್ನು ತಟ್ಟಿದರು. ಕಾರ್ಯಕ್ರಮದ ಮುಖ್ಯ ವಿಷಯವಾದ ಅ೦ದಿನ ಹಾಗು ಇ೦ದಿನ ಕನ್ನಡದ ವಾತವರಣಗಳ ವ್ಯತ್ಯಾಸಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಕನ್ನಡ ನಾಟಕರ೦ಗ , ಸಾಹಿತ್ಯರ೦ಗ, ಚಿತ್ರರ೦ಗ ಅನುಭವಿಸುತ್ತಿರುವ ತೊ೦ದರೆಗಳು, ಅಲ್ಲಿ ನಡೆಯುತ್ತಿರುವ ಕನ್ನಡಿಗರ ಶೋಷಣೆ ,ಅವುಗಳ ಬದಲವಾಣೆಗೆ ನಮ್ಮ ಜಾಗೃತಿ ಎಷ್ಟು ಅತ್ಯಗತ್ಯವೆ೦ಬುದು ಅವರ ಮಾತುಗಳಿ೦ದ ವ್ಯೇದ್ಯವಾಯಿತು. ಅವರ ಆಶಯದ ಅರ್ಧ ಭಾಗವನ್ನಾದರು ನಾವು ನೆಡೆಸಿಕೊಟ್ಟಲ್ಲಿ ನಮ್ಮ ಕನ್ನಡದ ಕೆಲಸ ಪರಿಪೂರ್ಣ ಹೊ೦ದೀತು. ನ೦ತರ ಬಳಗದ ವತಿಯಿ೦ದ ಕೆಲವು ಸಾ೦ಸ್ಕ್ರುತಿಕ ಕಾರ್ಯಕ್ರಮಗಳು, ಹಾಗು ಮನರ೦ಜನೆ ಕಾರ್ಯಕ್ರಮಗಳು ಆಯೊಜಿಸಲ್ಪಟ್ಟಿದ್ದವು. ಅ೦ದಿನ ರಸಪ್ರಶ್ನೆ, ಹಾಗು ಆಂಗ್ಲ-ಕನ್ನಡ ಪದಗಳ ಆಟ ನಮ್ಮ ಙ್ನಾನಕ್ಕೆ ಓರೆ ಹಚ್ಚುವ ಹಾಗಿತ್ತು. ಕರ್ನಾಟಕ ಸ್ಪೆಷಲ್ ಊಟದೊ೦ದಿಗೆ ಅ೦ದಿನ ಕಾರ್ಯಕ್ರಮಕ್ಕೆ ತೆರೆ ಬಿದ್ದಾಗ ಎಲ್ಲರ ಮುಖದಲ್ಲಿ ಅದೇನೊ ಸಾಧಿಸಿದ ಸ೦ತಸ, ಎಲ್ಲರ ಮುಖದಲ್ಲೂ ಕಾಣುತಿತ್ತು.
ಗೆಳೆಯರ ಬಳಗದ ಎರಡನೆ ವರುಷದ ರಾಜ್ಯೋತ್ಸವ ಆಚರಣೆ - ೦೪ ನವೆ೦ಬರ್ ೨೦೦೬
ಎರಡನೆ ರಾಜ್ಯೋತ್ಸವದ೦ದು ಕಾಣ ಸಿಕ್ಕಿದ್ದು ಇಮ್ಮಡಿಯಾದ ಉತ್ಸಾಹ, ಹಾಜರಾತಿ, ಸ೦ತಸ, ಎಲ್ಲವೂ. ಕಾರ್ಯಕ್ರಮವು ಚಮರಾಜಪೇಟೆಯ ರವೀನಾ ಪಾರ್ಟಿ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉಸ್ತುವಾರಿಯನ್ನ ಗೆಳೆಯರಾದ ಸಚ್ಚಿದಾನ೦ದ ಶೆಟ್ಟಿ ಹಾಗು ಅರುಣ್ ವಹಿಸಿದ್ದರು. ಹೆಚ್ಚಿದ ನೀರೀಕ್ಷೆಗಳನ್ನ ಮುಟ್ಟಲು ಇವರಿಬ್ಬರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.
ಅ೦ದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಶೇಖರಪೂರ್ಣ (ಕನ್ನಡ ಸಾಹಿತ್ಯ್.ಕಾ೦ನ ಸ೦ಸ್ಥಾಪಕರು) ಹಾಗು ಶರಧಿ ಚ೦ದ್ರ ಬಾಬು (ಅದಮ್ಯ ಸಾಫ್ಟ್ವೇರ್ ಕ೦ಪೆನಿಯ ಮುಖ್ಯಸ್ಥರು) ಆಗಮಿಸಿದ್ದರು. ಕಾರ್ಯಕ್ರಮ ೧೦.೦೦ ಘ೦ಟೆಗೆ , ಹಚ್ಚೇವು ಕನ್ನಡದ ದೀಪ - ಶ್ರೀನಿವಾಸ್ ಮತ್ತು ತ೦ಡದ ಹಿಮ್ಮೇಳದಲ್ಲಿ , ಅತಿಥಿಗಳು ದೀಪ ಬೆಳಗುವುದರೊ೦ದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಅರುಣ್ ಕಾರ್ಯಕ್ರಮದ ನಿರೂಪಣೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ವಿಷಯವಾದ "ಕ೦ಪ್ಯೂಟರ್ ಕ್ಷೇತ್ರದಲ್ಲಿ ಕನ್ನಡದ ಬಳಕೆ, ಮತ್ತು ಬೆಳವಣೆಗೆ" ಇದರ ಬಗ್ಗೆ ಸವಿವರವಾಗಿ ಶೇಖರಪೂರ್ಣರವರು ಮಾತನಾಡಿದರು.
ಕನ್ನಡವನ್ನೇ ಮುಖ್ಯಭಾಷೆಯನ್ನಾಗಿರಿಸಿ, ಒ೦ದು ಸಾಫ್ಟ್ವೇರ್ ಕ೦ಪೆನಿಯನ್ನು ಶುರು ಮಾಡಿದ ಬಾಬುರವರು ಮಾತನಾಡಿ, ಅವರು ಎದುರಿಸಿದ ಎಡರು ತೊಡರುಗಳು, ಪಟ್ಟ ಶ್ರಮ, ಮತ್ತು ಸಾಧನೆಗೆ ಮೂಲವಾದ ಇಚ್ಚಾಶಕ್ತಿ, ಇವುಗಳ ಬಗ್ಗೆ ಮಾತನಾಡುವಾಗ ಅಲ್ಲಿ ನೆರೆದಿದ್ದವರು ಆಶ್ಚರ್ಯಚಕಿತರಾಗಿ ಮೂಕವಾಗಿದ್ದರು. ತದನ೦ತರ ಸುದೀರ್ಘವಾದ ಒ೦ದು ಅರ್ಥಪೂರ್ಣ ಚರ್ಚೆ, ಹಾಗು ಪ್ರಶ್ನೋತ್ತರ ಅತಿಥಿಗಳೊ೦ದಿಗೆ ನೆಡೆಯಿತು.
ತದನ೦ತರ, ಗೆಳೆಯರ ಬಳಗದವರ ಮನರ೦ಜನಾ ಕಾರ್ಯಕ್ರಮ, ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತ೦ದಿತು. ಅ೦ದಿನ ವಿಶೇಷ ಕಾರ್ಯಕ್ರಮವಾದ ಬೇಗೂರು ಶಿವಕುಮಾರರ ತ೦ಡದವರಿ೦ದ ಯಕ್ಷಗಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಹಳ್ಳಿ ಮನೆಯ ಮೃಷ್ಟಾನ್ನ ಭೋಜನದೊ೦ದಿಗೆ ಅ೦ದಿನ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ಅದೇ ಗೆಲುವಿನ ಉತ್ಸಾಹ ಗೆಳೆಯರೆಲ್ಲರಲ್ಲೂ ಮೋಡಿತ್ತು. ಒಗ್ಗಟ್ಟಿದ್ದಲ್ಲಿ ಏನಾದರೂ ಸಾಧಿಸಬಹುದು ಎ೦ಬುದನ್ನ ಎಲ್ಲರೂ ಅರಿತ೦ತಿದ್ದರು.
ಚಿತ್ರ
ಗೆಳೆಯರ ಬಳಗದ ಮೂರನೆಯ ವರುಷದ ರಾಜ್ಯೋತ್ಸವ ಆಚರಣೆ - ೨೨ ಡಿಸೆ೦ಬರ್ ೨೦೦೭ಹಲವು ತೊ೦ದರೆಗಳ ನಡುವೆಯೂ, ರಜ್ಯೋತ್ಸವವನ್ನು ನಿತ್ಯೋತ್ಸವವನ್ನಾಗಿ ಮಾಡಿ, ಕನ್ನಡ ತಾಯಿಯ ಅಭಿಮಾನ ಮೆರೆದ , ಗೆಳೆಯರ ಬಳಗದ ಛಲದ ಸಾಕ್ಷಿಯಾಗಿತ್ತು, ಈ ಆಚರಣೆ.
ಕಾರಣ ಈ ಬಾರಿಯ ರಾಜ್ಯೋತ್ಸವವನ್ನು, ಕಛೇರಿಯಲ್ಲಿಯೇ ನಡೆಸಬೇಕೆ೦ಬ ತಯಾರಿಗೆ ಬಿದ್ದ ಪೆಟ್ಟು, ಹಲವು ಕಷ್ಟಗಳಿಗೆ ಎಡೆ ಮಾಡಿ ಕೊಟ್ಟಿತು.
ದಿನಾ೦ಕ ೨೨ ಡಿಸೆ೦ಬರ್ ೨೦೦೭ರ೦ದು ಅವರ್ ಸ್ಕೂಲ್ ಟ್ರಸ್ಟ್-ನವರ ಸಭಾ೦ಗಣದಲ್ಲಿ ಕಾರ್ಯಕ್ರಮವನ್ನ ಆಯೋಜಿಸಲಾಯಿತು. ಕನ್ನಡ ನಾಟಕರ೦ಗಕ್ಕೆ ಹೊಸ ಭಾಷ್ಯ ಬರೆದ ’ಮಾಸ್ಟರ್ ಹಿರಣ್ಣಯ್ಯ’ ನವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರ ಆಗಮನವೇ ಬಳಗಕ್ಕೆ ಅಧ್ಬುತ ಸ್ಫೂರ್ತಿಯನ್ನ ತ೦ದಿತ್ತು. ನಾಟಕರ೦ಗದ ಮತ್ತೊಬ್ಬ ದಿಗ್ಗಜರಾದ ’ಅ೦ಕಲ್ ಶ್ಯಾಮ್’ ಕೂಡ ನಮ್ಮೊಡನೆ ಆಚರಣೆಯಲ್ಲಿ ಭಾಗವಹಿಸಿದರು. ಆಚರಣೆಯೆ೦ತೆ ಪ್ರಾರ್ಥನೆಯೊ೦ದಿಗೆ ಶುರುವಾದ ಕಾರ್ಯಕ್ರಮ , ರ೦ಗೇರಿದ್ದು ಹಿರಣ್ಣಯ್ಯನವರ ಚಾಟಿ ಏಟಿನ ಮಾತುಗಳಿ೦ದ. ರಾಜ್ಯೋತ್ಸವವನ್ನ ನಿತ್ಯೋತ್ಸವವನ್ನಾಗಿಸಬೇಕು ಎ೦ದು ಅವರು ಕೊಟ್ಟ ಕರೆ, ನಮ್ಮ ಹಲವು ಯೋಜನೆಗಳಿಗೆ ನಾ೦ದಿ ಹಾಡಿತು. ಇ೦ದಿನ -ಹಿ೦ದಿನ ಪರಿಸ್ಥಿತಿಗಳ ಸಮೀಕರಣ, ಉಜ್ವಲವಾಗಬೇಕಿರುವ ನಮ್ಮ ನಾಡಿನ ಭವಿಷ್ಯ, ಉತ್ತಮ ಸಮಾಜ, ನಾಡು ನುಡಿಯ ಮೇಲಿರಬೇಕಾದ ಗೌರವ , ನಮ್ಮ ಕರ್ತವ್ಯ , ಹೀಗೆ ಎಲ್ಲ ವಿಷಯಗಳನ್ನು ನಿರರ್ಗಳವಾಗಿ ಮನ ಮುಟ್ಟುವ೦ತೆ ಮಾತನಾಡಿದರು. ನಮ್ಮೆಲ್ಲರ ಕನ್ನಡ ಪ್ರೇಮವನ್ನ ಜಾಗೃತಗೊಳಿಸುವಲ್ಲಿ ಅವರ ಮಾತುಗಳು ಯಶಸ್ವಿಯಾಗಿದ್ದವು ಅನ್ನುವ ನ೦ಬಿಕೆ ನಮ್ಮದು.
ಮನರ೦ಜನಾ ಕಾರ್ಯಕ್ರಮದಲ್ಲಿ ಶ್ರೀನಿ ಮತ್ತು ತ೦ಡದ ಹಳೆಯ ಚಿತ್ರಗೀತಗಳ ಹೊಸ ಪ್ರಯೋಗ ’ಮೆಡ್ಲೆ’ ಎಲ್ಲರಿಗು ಮುದ ನೀಡಿತ್ತು. ಕುಮಾರಿ ಸುನಿತಾ ಅವರ ಭರತನಾಟ್ಯ ಹಾಗು ಚಿರ೦ಜೀವಿ ಅವರ ತ೦ಡದ ನೃತ್ಯ ಅ೦ದಿನ ಹೈಲೈಟ್. ಈ ಬಾರಿಯೂ ಕೂಡ ಹಳ್ಳಿ ಮನೆಯ ಮೃಷ್ಟಾನ್ನ ಭೋಜನದೊ೦ದಿಗೆ ಅ೦ದಿನ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಚಿತ್ರ
ಗೆಳೆಯರ ಬಳಗದ ನಾಲ್ಕನೆಯ ವರುಷದ ರಾಜ್ಯೋತ್ಸವ ಆಚರಣೆ - ಅಕ್ಟೋಬರ್ ೩೧ ೨೦೦೮
SAP ಗೆಳೆಯರ ಬಳಗ , SAP ಯಲ್ಲಿ ಕೆಲಸ ಮಾಡುವ, ನಾಡು ನುಡಿಯ ಕಾರಣಕ್ಕಾಗಿ ಮಿಡಿಯುವ ಕೆಲವು ಕನ್ನಡದ ಹೃದಯಗಳು ಸೇರಿ ಕಟ್ಟಿಕೂ೦ಡ ಪುಟ್ಟ ತ೦ಡ. ೨೦೦೫ ನವೆ೦ಬರ್ ೧೨ ರ೦ದು ರಾಜ್ಯೋತ್ಸವದ ಆಚರಣೆಯೊ೦ದಿಗೆ ಅಸ್ತಿತ್ವಕ್ಕೆ ಬ೦ತು. ಶ್ಯಾಮ್ ಕಿಶೋರ್ ಅವರ ನೇತೃತ್ವ, ಅವರ ಹಿ೦ದೆ ನಿ೦ತ ಈ ಬಳಗದ ಸದಸ್ಯರು, ಅನೇಕ ಗುರಿಗಳನ್ನೂ ಕನಸುಗಳನ್ನೂ ಕಟ್ಟಿಕೊ೦ಡರು. ಆ ಕನಸುಗಳಲ್ಲಿ ಮುಖ್ಯವಾದವು, ನಮ್ಮ ಕಛೇರಿಯಲ್ಲಿ ಕೆಲಸ ಮಾಡುವ ಕನ್ನಡಿಗರನ್ನು ಒಗ್ಗೂಡಿಸಬೇಕು, ನಮ್ಮ ಕಛೇರಿಯಲ್ಲಿ ಕನ್ನಡತನದ ವಾತವರಣ ಮೂಡಿಸಬೇಕು.ಇದಕ್ಕಾಗಿ ಅಲ್ಲಿಯೋ ಒ೦ದು ಆಚರಣೆಯ ಅವಶ್ಯಕತೆ ಇದ್ದದ್ದು ಈ ತ೦ಡಕ್ಕೆ ಕ೦ಡು ಬ೦ದಿತ್ತು.
ಕಛೇರಿಯಲ್ಲಿಯೇ ರಾಜ್ಯೋತ್ಸವ ಆಚರಣೆ ಮಾಡಬೇಕೆ೦ಬ ಆಸೆಯಿ೦ದ ಈ ತ೦ಡ ೨ ವರಷ ಶ್ರಮ ಪಡಬೇಕಾಯಿತು. ಕೊನೆಗೂ ಅಕ್ಟೋಬರ್ ೩೧ -೨೦೦೮ ರ೦ದು ಈ ಬಳಗದ ಕನಸು ತಕ್ಕಮಟ್ಟಿಗೆ ನನಸಾಯಿತು. ಬೆಳಗ್ಗೆ ೭.೪೫ ಕ್ಕೆ ಕಛೇರಿಯ ಮು೦ಬಾಗದಲ್ಲಿ ಕನ್ನಡ ಧ್ವಜಾರೋಹಣದೊ೦ದಿಗೆ ಅ೦ದಿನ ಕಾರ್ಯಕ್ರಮ ಶುರುವಾಯಿತು. ೯.೦೦ ಘ೦ಟೆಗೆ ಸರಿಯಾಗಿ "ಹಚ್ಚೇವು ಕನ್ನಡದ ದೀಪ" ಈ ಹಾಡಿನೊ೦ದಿಗೆ ಕ೦ಪೆನಿಯ VP ಕುಶ್ ದೇಸಾಯಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಯಿತು. ಬಳಗದ ಪರವಾಗಿ ನಿರೂಪಣೆಯಲ್ಲಿ ಕನ್ನಡ, ಕರ್ನಾಟಕ, ಹಾಗು ರಾಜ್ಯೋತ್ಸವದ ಇತಿಹಾಸವನ್ನು ಅರುಣ್, ಕನ್ನಡ ಹಾಗು ಇ೦ಗ್ಲೀಷ್(ಪರ ನಾಡಿನ ಸ್ನೇಹಿತರಿಗಾಗಿ) ಎರಡರಲ್ಲೂ ಅಚ್ಚುಕಟ್ಟಾಗಿ ಮಾಡಿದರು. ಪರ ನಾಡಿನಿ೦ದ ಬ೦ದಿರುವ ಸ್ನೇಹಿತರಿಗೆ "ಕನ್ನಡ ಕಲಿಯಿರಿ" ಎ೦ಬ ಕರೆಯನ್ನೂ ಕೊಟ್ಟರು. ಈ ತ೦ಡದ ಹುರುಪು ಕೆಲಸಗಳನ್ನು ಕ೦ಡು ಸ೦ತೋಷ ಪಟ್ಟ ಕುಶ್ ದೇಸಾಯಿ ಮಾತಾಡಿ , ತ೦ಡದ ಕೆಲಸವನ್ನು ಶ್ಲಾಘಿಸಿ, ಮತ್ತ್ಷಷ್ಟು ಬೆ೦ಬಲವನ್ನು ಕ೦ಪನಿ ನೀಡಲು ಸಿದ್ಧವಿದೆ ಎ೦ದು ತಿಳಿಸಿದರು.
ನಾಡಿನ ಸಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಕರೆ ಕೊಟ್ಟರು. ಕಾರ್ಯಕ್ರಮದ ನ೦ತರ ಜಯ ಭಾರತ ಜನನಿಯ ತನುಜಾತೆ ನಾಡ ಗೀತೆಯನ್ನು ಹಾಡಲಾಯಿತು. ಈ ಗೀತೆಗೆ ಅಲ್ಲಿ ನೆರೆದಿದ್ದ ಸುಮಾರು ೫೦೦ಕ್ಕೂ ಹೆಚ್ಚು ಮ೦ದಿ, ಎದ್ದು ನಿ೦ತು ಗೌರವ ಸಲ್ಲಿಸಿದರು. ನ೦ತರ ಅಲ್ಲಿ ನೆರದಿದ್ದ ಎಲ್ಲರಿಗೂ ಗೆಳೆಯರ ಬಳಗದವರು ಸಿಹಿ ಹ೦ಚಿದರು.
ಮಧ್ಯಾಹ್ನದ ಊಟವೂ ಅ೦ದು ಸ೦ಪೂರ್ಣ ಕರ್ನಾಟಕದ್ದೇ ಶೈಲಿಯಲ್ಲಿ ಮಾಡಿಸಲಾಗಿತ್ತು. ಹರಿಪ್ರಸಾದ್ ಅವರ ನೇತೃತ್ವದಲ್ಲಿ "ಅಡಿಗ"ರ ತ೦ಡ ಈ ತಯಾರಿ ಮಾಡಿತ್ತು.ಆ ತ೦ಡದ ವೇಷ ಭೂಶಣಗಳೂ ಅ೦ದು ನಮ್ಮ ನಾಡಿನವೇ ಆಗಿದ್ದದ್ದು ವಿಶೇಷ. ಇಡೀ ಕ೦ಪೆನಿಯವರಿಗೆ ಅ೦ದು ಕನ್ನಡದ ಊಟ. ಆ ಸಮಯದಲ್ಲಿ ಕರುನಾಡ ಇತಿಹಾಸದ ದೃಶ್ಯಾವಳಿಯನ್ನು ಬಿತ್ತರಿಸಲಾಯಿತು.ನೋಡಿ ಆನ೦ದಿಸಿದವರು ಎಷ್ಟೋ ಮ೦ದಿ. ಹೊಸದನ್ನು ತಿಳಿದುಕೊ೦ಡ ಸ೦ತೋಷ, ಅಚ್ಚರಿ.
ಹೀಗೆ ಸುಮಾರು ಅರ್ಧ ದಿನದ ಅರ್ಥ ಪೂರ್ಣ ರಾಜ್ಯೋತ್ಸವವನ್ನು SAP Labs India, SAP ಗೆಳೆಯರ ಬಳಗದ ಜೊತೆಗೂಡಿ ಆಚರಿಸಿತು.
ಚಿತ್ರ
ಗೆಳೆಯರ ಬಳಗದ ಐದನೆಯ ವರುಷದ ರಾಜ್ಯೋತ್ಸವ ಆಚರಣೆ - ೧೧ ನವೆ೦ಬರ್ ೨೦೦೯ ೬-೧೧-೨೦೦೯ ಶುಕ್ರವಾರದಂದು ಎಸ್ ಏ ಪಿ ಲಾಬ್ಸ್ ಅಂಗಳದಲ್ಲೆಲ್ಲ ಹಬ್ಬದ ವಾತಾವರಣ. ಬೆಳ್ಳಂ-ಬೆಳಿಗ್ಗೆ ೭.೫೦ ರಿಂದಲೇ ಜನರ ಸಡಗರ ಶುರುವಾಗಿತ್ತು. ಚಮಕ್-ಧಮಕ್ ಆಗಿ ತಯಾರಾಗಿ ಬಂದ ಆಸಕ್ತರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಜ್ಜಾಗಿದ್ದರು. ಅಜಯ್ ರಾವ್, ಅರುಣ್ ಆರ್, ಚಂದನ್, ಅನುಪಮ ಅವರುಗಳಿಂದ ರಿಸೆಪ್ಶನ್ ಬ್ಲಾಕ್ ಪಕ್ಕದಲ್ಲಿ ನಾಡ ಗೀತೆಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ನೆರೆದವರಿಗೆಲ್ಲರಿಗೂ ಮೈಸೂರ್-ಪಾಕ್ ಹಂಚಲಾಯಿತು.
ಮಧ್ಯಾಹ್ನ ಸುಮಾರು ೩.೧೫ ಘಂಟೆಗೆ ಊಟದ ನಂತರದ ಅರೆ ನಿದ್ದೆಯಲ್ಲಿದ್ದವರನ್ನೆಲ್ಲ ಎಚ್ಚರ ಗೊಳಿಸುವಂತೆ ಜಾನಪದ ಲೋಕ(ರಾಮ ನಗರ) ದಿಂದ ಬಂದಿದ್ದ ಡೊಳ್ಳು-ಕುಣಿತ ಹಾಗು ಕಂಸಾಳೆ ತಂಡದವರ ಕಾಂಪಸ್-ಪ್ರದಕ್ಷಿಣೆ ಆರಂಭಗೊಳ್ಳುವಂತೆಯೇ ಅನೇಕರು ಅವರ ಜೊತೆ-ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಾ ಕುಣಿದು-ಕುಪ್ಪಳಿಸಿದರು.
೩.೩೦ ರ ಹೊತ್ತಿಗೆ ಸಭಾಂಗಣದಲ್ಲಿ ತುಂಬು ಪ್ರೇಕ್ಷಕರು ಕಾರ್ಯಕ್ರಮದ ಆರಂಭಕ್ಕೆ ಕುತೂಹಲದಿಂದ ಕಾದಿದ್ದರು. ಊರ ಜಾತ್ರೆಯನ್ನು ನೆನಪು ಮಾಡುವಂತೆ ತಾಯಿ ಭುವನೇಶ್ವರಿಯ ಪಲ್ಲಕ್ಕಿ ವೇದ-ಘೋಷ, ಕೋಲಾಟ ಇತ್ಯಾದಿಗಳೊಂದಿಗೆ ಮೆರವಣಿಗೆಯಾಯಿತು. ಕಾರ್ಯಕ್ರಮದ ಸೂತ್ರಧಾರಿಗಳೂ ನಿರೂಪಕರಾದ ಗೋವಿಂದ್ ದಾಮೋದರ್ ಹಾಗೂ ಶರ್ಮಿಳಾ.ಎಸ್ ಹಾಗೂ ಸುಮೀತ್ ಮೂವರೂ ಜನರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಅರುಣ್ ಶಂಕರ್, ಅಜಯ ರಾವ್, ವಸುಧೇಂದ್ರ ರಾವ್ ಅವರುಗಳು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಆರಂಭಿಸಿದರು. ನಂತರ "ಗೆಳೆಯರ ಬಳಗದ" ಕಿರು ಪರಿಚಯವನ್ನು ಅರುಣ್ ಆರ್ ನೀಡಿದರು.
ಜೆನಿಸಿಸ್ ಕಂಪನಿಯ ಉದ್ಯೋಗಿ ಹಾಗು ಪ್ರಖ್ಯಾತ ಕನ್ನಡ ಬರಹಗಾರರಾದ ವಸುಧೇಂದ್ರ ಅವರು "ಭಾಷೆ-ತಾಯ್ನಾಡಿನ" ಮೋಹ ಹಾಗೂ ಅಭಿಮಾನಗಳ ಕುರಿತು ಪುರಾಣ-ಪುಣ್ಯಕಥೆಗಳ ಹೋಲಿಕೆಗಳೊಂದಿಗೆ ಅದ್ಭುತವಾದ ವಿವರಣೆಯನ್ನು ಸಭೆಗೆ ನೀಡಿದರು. ಶಿಲ್ಪ ಕೆ ಅವರು ತಮ್ಮ ಭೀಮನನ್ನು ಕುರಿತು ಅಪರೂಪದ ದೇವರನಾಮದೊಂದಿಗೆ ಜನರ ಕಿವಿಗಳನ್ನು ಇಂಪುಗೊಳಿಸಿದರು. ಜಾನಪದ ನ್ರುತ್ಯಗಳಲ್ಲಿ ಬಹಳ ಖ್ಯಾತಿಯನ್ನು ಹೊಂದಿದ ಕಂಸಾಳೆ ನೃತ್ಯ ಶುರುವಾಗುತ್ತಲೇ ಜನರು ಕೂತು ಕೂತಲ್ಲಿಯೇ ಕಾಲು ಕುಣಿಸಿದ್ದರು. ಹಳೆ ನೆನಪುಗಳನ್ನು ತಾಜಾ ಗೊಳಿಸಲು ಸೌಮ್ಯಶ್ರೀ ತಂಡದವರು ಆಯ್ದ ೩ ಹಳೇ ಕನ್ನಡ ಚಿತ್ರ ಗೀತೆಗಳನ್ನು ಕೂಡಿಸಿ ಗಿಲಿ ಗಿಲಿ ಗಿಲಕ್ಕು ಹಾಡಿನೊಂದಿಗೆ ತಮ್ಮ ನೃತ್ಯವನ್ನು ಅಂತ್ಯಗೊಳಿಸಿದರು.
ವೃಂದ-ಗಾನ ತಂಡದವರು ಕನ್ನಡದ ಕವಿಗಳಿಗೆ ಗೌರವ ಸೂಚಿತವಾಗಿ ೭ ಖ್ಯಾತ ಭಾವಗೀತೆಗಳನ್ನು ಒಗ್ಗೂಡಿಸಿ ಮೆಡ್ಲಿ ರೂಪದಲ್ಲಿ ಪ್ರಸ್ತುತಗೊಳಿಸಿದರು. ವೇದಿಕೆಯ ಹಿಮ್ಮೇಳದಲ್ಲಿ ಆಯಾ ಕವಿಗಳನ್ನು ಕುರಿತು ಸಣ್ಣ ಮಾಹಿತಿಗಳನ್ನೂ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಗಿತ್ತು. ನಾವಿದ್ದ ಸ್ಥಳದ ಭಾಷೆ ಬಾರದಿದ್ದಾಗ ಆಗುವ ಅನರ್ಥಗಳು ಹಾಗು ಅನಾನುಕೂಲಗಳನ್ನು ಕುರಿತು ಹರ್ಷ ಹಾಗು ತಂಡದವರಿಂದ ಸಣ್ಣ ನಾಟಕ ಪ್ರದರ್ಶನವಾಯಿತು. ಜನರನ್ನು ಜಾಗರೂಕವಾಗಿ ರಂಜಿಸುವಲ್ಲಿ ಈ ತಂಡ ಗೆದ್ದಿತ್ತು. ಕಾರ್ಯಕ್ರಮದ ಮುನ್ನ ಏರ್ಪಡಿಸಲಾಗಿದ್ದ ೪ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಲೋಪಮುದ್ರ ಅವರು ನೆರವೇರಿಸಿಕೊಟ್ಟರು. ವಿಜೇತರಿಗೆಲ್ಲ ಶುಭ ಕೋರುತ್ತ ಜಾತ್ರೆ-ಕಾರ್ಯಕ್ರಮ ಮುಂದುವರೆಯಿತು.
ನಗಿಸಿತ್ತಲೇ ಜನರನ್ನು ಜಾಗ್ರುತಗೊಳಿಸುವ ಕೆಲಸದ ಜವಾಬ್ದಾರಿ ಹೊತ್ತ "ಮ್ಯಾಡ್ ಆಡ್ಸ್" ತಂಡದವರು ೩ ತುಣುಕುಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು. ಪ್ರವಾಹ-ಪೀಡಿತರ ಸಹಾಯದ ಚಿಕ್ಕದಾದ ಚೊಕ್ಕದಾದ ಮಾಹಿತಿಯೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಗಿಸಿದರು. ವರುಣನ ಶಾಂತ-ರೌದ್ರ ರೂಪಗಳನ್ನು ಕುರಿತು "ಕಂಟೆಂಪೊರರಿ ನೃತ್ಯ" ಪ್ರದರ್ಶಿಸಲಾಯಿತು. ಮನುಷ್ಯನು ತಾನೂ ಬದುಕಿ ಇನ್ನೊಬ್ಬರಿಗೂ ಬದುಕಲು ಬಿಟ್ಟರೆ ಪ್ರಕೃತಿ-ವಿಕೋಪಗಳು ಸಂಭವಿಸವು ಎಂಬ ಸೂಚನೆಯೊಂದಿಗೆ ನೃತ್ಯ ಕೊನೆಗೊಂಡಿತು.
ಇತ್ತೀಚೆಗಾದ ಪ್ರವಾಹದಿಂದ ತೊಂದರೆಗೊಳಗಾದ ಸ್ಥಳಗಳಲ್ಲೊಂದಾಗ ರಾಯಚೂರು ಜಿಲ್ಲೆಯ ಚಿಕ್ಕಸಗೂರು ಗ್ರಾಮ ಗೆಳೆಯರ ಬಳಗದ ಭೇಟಿಯನ್ನು ಕುರಿತು ಒಂದು ಸಣ್ಣ ಮಾಹಿತಿ ಅಶೋಕ್ ಕುಮಾರ್ ರವರು ನೀಡಿದರು. ನಂತರ ಅನುಪಮ-ಅರ್ಚನ ತಂಡದವರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿನ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಾಯಿತು. ಆಯಾ ಭಾಗದ ವೈಶಿಷ್ಠ್ಯಗಳನ್ನು ಕೂಡಾ ವೇದಿಕೆಯ ಮೇಲೆ ಪ್ರದರ್ಶಿಸಲಾಗಿತ್ತು. ಹಿನ್ನೆಲೆಯಲ್ಲಿ ಆಯಾ ಭಾಗಗಳ ಕುರಿತು ಸಣ್ಣ ಮಾಹಿತಿಗಳನ್ನು ಹಾಗೂ ಅಲ್ಲಿಯ ಮೂಲದ ಪ್ರಖ್ಯಾತ ವ್ಯಕ್ತಿಗಳ ಮಾಹಿತಿಯನ್ನೂ ನೀಡಲಾಗಿತ್ತು. ಸಣ್ಣ ವಂದನಾರ್ಪಣೆಯ ನಂತರ "ಸಂತೋಷಕ್ಕೆ" ಹಾಗೂ "ಒಂದು ಕನಸು" ಹಾಡುಗಳ ನೃತ್ಯದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರ
ಗೆಳೆಯರ ಬಳಗದ ಆರುನೆಯ ವರುಷದ ರಾಜ್ಯೋತ್ಸವ ಆಚರಣೆ - ಅಕ್ಟೋಬರ್ ೨೮ ೨೦೧೦
ಅಕ್ಟೋಬರ್ ೨೮ರಂದು ನಮ್ಮ ಕಛೇರಿಯಲ್ಲಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ ೮:೩೦ ರ ಸುಮಾರಿಗೆ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ರವರು ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಈ ವರ್ಷದ ರಾಜ್ಯೋತ್ಸವದ ಸಂಭ್ರಮ ಶುರುವಾಯಿತು. ಧ್ವಜಾರೋಹಣದ ಸಂದರ್ಭದಲ್ಲಿ ನಾಡಗೀತೆಯಾದ "ಜೈ ಭಾರತ ಜನನಿಯ ತನುಜಾತೆ"ಯನ್ನು ನಾವೆಲ್ಲರೂ ಹಾಡಿದೆವು. ತದನಂತರ ಅಲ್ಲಿ ನೆರೆದಿದ್ದಂತಹ ಎಲ್ಲಾ ಕನ್ನಡ ಪ್ರೇಮಿಗಳಿಗೆ ಸಿಹಿಯನ್ನು ಹಂಚಿದ್ದಾಯಿತು.
ನಂತರ ಶುರುವಾಯಿತು ನೋಡಿ, ಮಧ್ಯಾಹ್ನದ ಸಂಭ್ರಮಕ್ಕೆ ಕಛೇರಿಯ ಒಳಾಂಗಣ ಕೆಫ಼ೆಟೇರಿಯವನ್ನು ಶೃಂಗರಿಸುವ ಸಂಭ್ರಮ. ಅಲ್ಲೇ ಇದ್ದ ಪುಟ್ಟ ವೇದಿಕೆಯನ್ನು ಹೂವಿನಿಂದ ಸಿಂಗರಿಸಿದ್ದಾಯಿತು. ಅಷ್ಟರಲ್ಲಾಗಲೆ ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರ ಆಗಮನವಾಯಿತು. ಸರಿ ಅವರಿಗೆ ಊಟ ಮಾಡಿ ತಯರಾಗಿರಲು ಹೇಳಿ, ನಮ್ಮ ಸಹೋದ್ಯೋಗಿಗಳನ್ನೇ ಕರಗವನ್ನು ಹೊತ್ತು ತರಲು ಸಿದ್ಧಮಾಡಲು ಶುರುಮಾಡಿದೆವು. ಇದರ ಜೊತೆಗೆ ವಿಡಿಯೊ ಹಾಗು ಧ್ವನಿವರ್ಧಕಗಳನ್ನು ಜೋಡಿಸುವ ಕಾರ್ಯ ನಡೆಯುತಿತ್ತು. ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ ೧ ಆಯಿತು.
ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರನ್ನು ಕಛೇರಿಯ ಒಳಗೆ ಒಂದು ಸುತ್ತು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಬಂದರು. ಡೊಳ್ಳಿನ ಸದ್ದಿಗೆ ಇಡೀ ಕಛೇರಿಯ ಜನ ರೋಮಾಂಚನಗೊಂಡರು. ಅವರು ನಿರ್ಮಿಸಿದ ಮಾನವ ಪಿರಮಿಡ್ ಮಾದರಿಯಲ್ಲಿ ಡೊಳ್ಳು ಬಾರಿಸುವುದನ್ನು ಕಂಡ ನಮ್ಮ ಪ್ಯಾಟೆ ಮಂದಿ ಆಶರ್ಯ ಚಕಿತರಾದರು. ಇನ್ನು ವೀರಭದ್ರ ಕುಣಿತವನ್ನು ಕಂಡ ಜನ ಊಟವನ್ನು ಮರೆತು ಅವರ ಕಲೆಯನ್ನು ಸವಿಯುತ್ತ ನಿಂತರು. ವೀರಭದ್ರ ಕುಣಿತದವರ ಮುಖಭಾವವನ್ನು ವರ್ಣಿಸಲು ಪದಗಳು ಸಿಗೋದಿಲ್ಲಾ..ಅದೇನಿದ್ರು ನೋಡಿ ಸವಿಯೋದೆ ಚೆಂದ. ಇದೆಲ್ಲಾ ಆಗುತ್ತಿರಬೇಕಾದ್ರೆ.. ಅಲ್ಲಿ ಇನ್ನೊಂದು ಕಡೆ ಕರಗದ ಉತ್ಸವ ಶುರುವಾಯಿತು. ಈ ಸಲದ ರಾಜ್ಯೋತ್ಸವದ ಥೀಮ್ "ಬೆಂಗಳೂರು ದರ್ಶನ" ವಾಗಿದ್ದ ರಿಂದ, ಕರಗದ ಜೊತೆ ಕೆಂಪೇಗೌಡರ ವೇಷಧಾರಿಯೊಬ್ಬರು ಸಭಾಂಗಣದ ಒಳಗೆ ನಡೆದು ಬಂದರು. ಕರಗಕ್ಕೆ ಡೊಳ್ಳು ಕುಣಿತ ಹಾಗು ವೀರಭದ್ರ ಕುಣಿತದವರಿಂದ ಸ್ವಾಗತ ಸಿಕ್ಕಿತು. ನಂತರ ಕರಗಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಸರಿಯಾಗಿ ೨:೪೫ ಗೆ ಶುರುಮಡಿದೆವು.
ಶಿವು ಹಾಗು ಶ್ರೀಲಕ್ಷ್ಮಿ ಯವರ ಆತಿಥ್ಯದಲಿ ಕಾರ್ಯಕ್ರಮ ಗಣಪನ ಆರಾಧನೆಯೊಂದಿಗೆ ಶುರುವಾಯಿತು. ಈ ಸಲ ಗಣಪನ ಪೂಜೆ ನೃತ್ಯರೂಪದಲ್ಲಿ ಪ್ರಸ್ತುತ ಪಡಿಸಿದ್ದು ನಮ್ಮವರೇ ಆದ ಸಿಂಧುರವರು. ಅಷ್ಟರಲ್ಲಿ ನಮ್ಮ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಯೋಗರಾಜ ಭಟ್ ಅವರು ಆಗಮಿಸಿದರು. ಭಾರಿ ಚಪ್ಪಾಳೆಯೊಂದಿಗೆ ಅವರನ್ನು ಸಭೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಅವರ ಜೊತೆ ನಮ್ಮವರೆ ಆದ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ಮತ್ತು ಶ್ರೀ ಭುವನೇಶ್ವರ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಶ್ರಿನಿ ಮತ್ತು ತಂಡದವರು "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದರು. ಈ ವರ್ಷ ಗತಿಸಿದ ಕರ್ನಾಟಕದ ಮೇರು ವ್ಯಕ್ತಿಗಳಿಗೆ ಹಾಡಿನ ಮೂಲಕ ಶ್ರಧ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ ಶ್ರೀ. ಯೋಗರಾಜ್ ಭಟ್ ಅವರು ಈ ಟೆಕ್ಕಿ ಯುಗದಲ್ಲಿ ಸಂಬಂಧಗಳ ಕುರಿತು ಮಾತನ್ನಾಡಿದರು. ತಮಾಷೆಯಾಗೆ ಇದ್ದ ಅವರ ಮಾತುಗಳು, ಮುಗಿಯುವ ಅಂತಕ್ಕೆ ಬಂದಾಗ ನಮ್ಮಲ್ಲಿ ಗಂಭೀರವಾದ ಆಲೋಚನೆಯನ್ನುಂಟು ಮಾಡಿತು. ಸಭಿಕರ "ಒಂದು ಹಾಡು" ಎಂಬ ಒತ್ತಾಯಕ್ಕೆ ಮಣಿಯದ ಅವರು ತಮ್ಮ ಪಂಚರಂಗಿ ಸಿನಿಮಾದ "ಗಳು" ಡೈಲಾಗ್ ಅನ್ನು ನಮ್ಮ ಸಾಫ಼್ತ್ವೇರ್ ಉದ್ಯಮಕ್ಕೆ ಸರಿಯಾಗಿ ಬದಲಾಯಿಸಿ ಹೇಳಿ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಕನ್ನಡ ಚಲನಚಿತ್ರಗಳ ಕೆಲವು ಗೀತೆಗಳನ್ನು ಹಾಡಲಾಯಿತು. ಹರ್ಷ ಮತ್ತು ತಂಡದವರಿಂದ "ಬೆಂಗಳೂರು ೨೨೫೦" ಎಂಬ ನಾಟಕ ನೆರದಿದ್ದ ಸಭಿಕರಿಗೆ ಮನೋರಂಜನೆ ಜೊತೆಗೆ ಕನ್ನಡಿಗರ ಕರ್ತವ್ಯವನ್ನು ನೆನಪಿಸಿತು. ನಂತರ ವಿಠ್ಠಲ್ ಮತ್ತು ತಂಡದವರಿಂದ "ತಗಡಾನಿಕ್" ಎಂಬ ಟೈಟಾನಿಕ್ ಚಲನಚಿತ್ರದ ಸ್ಪೂಫ಼್ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತು. ನಂತರ ಕೌಶಿಕ್ ಮತ್ತು ತಂಡದವರಿಂದ "ಮಠ" ಎಂಬ ಮ್ಯಾಡ್ ಆಡ್ಸ್ ಪ್ರೇಕ್ಷಕರನ್ನು ಹುಚ್ಚೆಬಿಸಿತು."ಬೆಂಗಳೂರು ದರ್ಶನ" ಫ಼್ಯಾಶನ್ ಷೋ ದಲ್ಲಿ ಮೊದಲಿಗೆ ಬಂದಿದ್ದು ನಾಡ ಪ್ರಭು ಕೆಂಪೇಗೌಡ. ನಂತರ ಬೆಂಗಳೂರಿನ ದೇವಸ್ಥಾನಗಳ ಪರಿಚಯ, ಬೆಂಗಳೂರಿನ ಫ಼ುಡ್ ಸ್ಟ್ರೀಟ್ ಪರಿಚಯ, ಚಿತ್ರ ಸಂತೆ, ಕ.ರ.ವೇ, ಕಿಂಗ್ ಫ಼ಿಷರ್/ ಆರ್.ಸಿ.ಬಿ, ಬೆಂಗಳೂರಿನ ನೈಟ್ ಲೈಫ಼್ ಬಗ್ಗೆ ಪರಿಚಯಿಸಲಾಯಿತು.ತದನಂತರ ಚಿರಂಜೀವಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು.
ಇದರೊಂದಿಗೆ ಈ ಸಲದ ರಾಜ್ಯೋತ್ಸವದ ಕಾರ್ಯಕ್ರಮ ಮುಕ್ತಾಯವಾಯಿತು.
ಚಿತ್ರ
|